Bangalore, ಏಪ್ರಿಲ್ 18 -- ದೆಹಲಿ ವಿಶ್ವವಿದ್ಯಾಲಯದ ಪ್ರಿನ್ಸಿಪಾಲೆಯು ಕ್ಲಾಸ್ ರೂಮಿನ ಗೋಡೆಗೆ ಸಗಣಿ ಬಳಿದಿದ್ದಕ್ಕೆ 'ಲೇಪಿಸಿದ್ದರು' ಎಂಬ ಪದವನ್ನೂ, ಅದನ್ನು‌ ಪ್ರತಿಭಟಿಸಿ ವಿದ್ಯಾರ್ಥಿಗಳು ಪ್ರಿನ್ಸಿಪಾಲೆಯ ಮನೆಯ ಗೋಡೆಗೆ ಸಗಣಿ ಬಳಿದಿದ್ದಕ್ಕೆ 'ವಿರೂಪಗೊಳಿಸಿದರು' ಎಂಬ ಪದವನ್ನೂ ಕನ್ನಡ ಪತ್ರಿಕೆಗಳು ಬಳಸಿವೆ. ಒಂದೇ ಕ್ರಿಯೆಯನ್ನು 'ಲೇಪ' ಶಬ್ದವು ಪವಿತ್ರೀಕರಿಸುತ್ತಿದ್ದರೆ, 'ವಿರೂಪ' ಶಬ್ದವು ದುರುಳೀಕರಿಸುತ್ತಿದೆ. ಭಾಷೆಯ ರಾಜಕಾರಣವಿದು. ನುಡಿಯ ಈ ರಾಜಕಾರಣವು, ಇತಿಹಾಸ ಬರವಣಿಗೆಯಿಂದ ಹಿಡಿದು ಮಾಧ್ಯಮ ವರದಿಗಳವರೆಗೆ, ನಾವು ಮತ್ತೊಬ್ಬರ ಜತೆ ನಿತ್ಯ ಬದುಕಿನಲ್ಲಿ ಮಾಡುವ ಮಾತುಕತೆಯ ತನಕ ಸುಪ್ತವಾಗಿ ವ್ಯಾಪಿಸಿದೆ. ಲಿಂಗ ವರ್ಗ ಜಾತಿ ಧರ್ಮ ಬಣ್ಣ ಸಿದ್ಧಾಂತದ ಆಧಾರದಲ್ಲಿ ಮಾಡಲಾಗುವ ತರತಮಗಳು ಸಾಂಸ್ಥೀಕರಣ ಮತ್ತು ಸಹಜೀಕರಣ ಪಡೆದಿರುವ ಸಮಾಜದಲ್ಲಿ, ಭಾಷೆಯು ಕೇವಲ ಸಂವಹನ ಮಾಧ್ಯಮವಲ್ಲ; ಅಧಿಕಾರಸ್ಥ ವರ್ಗಗಳು ತಮ್ಮ ಹಿತಾಸಕ್ತಿಗೆ ತಕ್ಕಂತೆ ಜನಾಭಿಪ್ರಾಯ ರೂಪಿಸುವ ಪ್ರಬಲ ಆಯುಧ ಕೂಡ. ಕನ್ನಡದ ಖ್ಯಾತ ಸಂಶೋಧಕರೊಬ್ಬರ ಬರ...