ಭಾರತ, ಜನವರಿ 28 -- ಪ್ರಶ್ನೆ: ನನ್ನ ಮಗಳು ಈಗಿನ್ನೂ 3ನೇ ತರಗತಿ ಓದುತ್ತಿದ್ದಾಳೆ. ಇತ್ತೀಚೆಗೆ ಯಾಕೋ ಮಂಕಾಗಿ ಇರುತ್ತಾಳೆ. ಒಳ್ಳೇ ಸ್ಕೂಲ್‌ಗೆ ಸೇರಿಸಿದ್ದೀವಿ, ಟ್ಯೂಷನ್‌ಗೆ ಕಳಿಸ್ತೀವಿ, ಮನೆಯಲ್ಲೂ ಶಿಸ್ತಿನಿಂದ ಬೆಳೆಸಿದ್ದೀವಿ. ಆದರೂ ಒಳ್ಳೇ ಮಾರ್ಕ್ಸ್‌ ತೆಗೆಯಲ್ಲ. ಅವಳಿಗೆ ಏನಾಗಿರಬಹುದು? ಈ ಸಮಸ್ಯೆಗೊಂದು ಪರಿಹಾರ ಸೂಚಿಸಿ ಮೇಡಂ. (ರಂಗನಾಥ ಸ್ವಾಮಿ, ಮೈಸೂರು)

ಉತ್ತರ: ಶಾಲೆಗಳಲ್ಲಿ ಮಕ್ಕಳು ಅನೇಕ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಈ ಸವಾಲುಗಳ ಬಗ್ಗೆ ಮಾತನಾಡಲು ಭಯ ಮತ್ತು ಸಂಕೋಚದಿಂದ ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ಪೋಷಕರ ಪಾತ್ರ ಬಹು ಮುಖ್ಯ. ಸವಾಲುಗಳನ್ನು ಎದುರಿಸುವುದಕ್ಕೆ ಮಕ್ಕಳಿಗೆ ಪೋಷಕರ ಸಹಾಯ ಅಗತ್ಯವಿದೆ. ಮನೆಯು ಮಕ್ಕಳಿಗೆ ಕಷ್ಟ ಸುಖ ಹಂಚಿಕೊಳ್ಳುವ, ಸಂಬಂಧಗಳನ್ನು ಬೆಸೆಯುವ, ನೊಂದ ಮನಸ್ಸುಗಳಿಗೆ ಮುದ ನೀಡುವ, ನೆಮ್ಮದಿ ನೀಡುವ ನೆಲೆಯಾಗಬೇಕು. ಮನೆಯ ವಾತಾವರಣ ಶಾಲೆಯಂತೆಯೇ ಆದರೆ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ.

ಪೋಷಕರು ಮಕ್ಕಳನ್ನು ತಮ್ಮ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ...