ಭಾರತ, ಫೆಬ್ರವರಿ 6 -- ಉಡುಪಿ: ಭಾರತೀಯ ಜ್ಞಾನಪರಂಪರೆಗೂ ಮಂದದೀಪದ ದುಃಸ್ಥಿತಿ ಬಂದೊದಗಿದಾಗ ಮತ್ತೆ ಜ್ಞಾನದೀವಿಗೆಗೆ ಎಣ್ಣೆ ಎರೆದು, ತಪ್ಪು ವ್ಯಾಖ್ಯೆಗಳ ಮಸಿ ಝಾಡಿಸಿ ದೀಪದ ರಕ್ಷಣೆಗಾಗಿ ಧರೆಗಿಳಿದ ಜೀವೋತ್ತಮ ವಾಯುತತ್ತ್ವವೇ ಶ್ರೀಮನ್ಮಧ್ವಾಚಾರ್ಯರು ಎಂಬುದು ಅವರ ತತ್ವ ಸಿದ್ಧಾಂತಗಳನ್ನು ಅನುಸರಿಸುತ್ತಿರುವವರ ದೃಢವಾದ ನಂಬಿಕೆ. ಕರ್ನಾಟಕದ ಕನ್ನಡಿಗ ಏಕೈಕ ವೇದಾಂತ ಆಚಾರ್ಯರು ಭಾಷ್ಯಕಾರರು ಎಂಬ ಕೀರ್ತಿ ಹೊಂದಿರುವ ಮಧ್ವಾಚಾರ್ಯರು ಕ್ರಿ.ಶ. ಹನ್ನೆರಡನೇ ಶತಮಾನದಲ್ಲಿ ದಕ್ಷಿಣ ಕರ್ನಾಟಕದ ಉಡುಪಿಯ ಬೆಳ್ಳೆ ಗ್ರಾಮದ ಪಾಜಕ ಎಂಬ ಪುಟ್ಟ ಹಳ್ಳಿಯಲ್ಲಿ ನಡಿಲ್ಲಾಯ ದಂಪತಿಗಳಿಗೆ ಮಗನಾಗಿ ಜನಿಸಿದವರು, ವಾಸುದೇವ ಎಂಬ ಬಾಲ್ಯನಾಮ ಅವರಿಗಿತ್ತು. ಉಡುಪಿಯಲ್ಲಿದ್ದ ಸನ್ಯಾಸಿ ಪರಂಪರೆಯ ಯತಿಗಳಾಗಿದ್ದವರು ಅಚ್ಯುತಪ್ರಜ್ಞಾಚಾರ್ಯರಿಂದ ಆರಂಭಿಕ ಗ್ರಂಥಗಳ ಪಾಠ ಕೇಳಿ, ಬಾಲ್ಯದಲ್ಲೇ ವಿರಕ್ತರಾಗಿ ಅವರಿಂದಲೇ ಸನ್ಯಾಸ ದೀಕ್ಷೆಯನ್ನು ಪಡೆದು ಪೂರ್ಣಪ್ರಜ್ಞ ಎಂಬ ಅಭಿಧಾನವನ್ನು ಪಡೆದರು. ಮುಂದೆ ವೇದಾಂತ ಸಿಂಹಾಸನದಲ್ಲಿ ಅಭಿಷಿಕ್ತರಾದಾಗ ಶ್ರೀ ಆನಂದ...