Mysuru,Bengaluru, ಏಪ್ರಿಲ್ 18 -- ಸಾಕವ್ವನಿಂದ ಶರ್ಮಿಷ್ಠೆಯತ್ತ: ಉಮಾಶ್ರೀ ಅವರು ಈಗ ಶರ್ಮಿಷ್ಠೆಯಾಗಿ ರಂಗದ ಮೇಲೇರಿ ರಂಗಪ್ರಿಯರನ್ನು ಅವರವರ ಕಲ್ಪನಾ ಲೋಕಕ್ಕೆ ಕರೆದೊಯ್ಯಲಿದ್ದಾರೆ. ಮೊದಲಬಾರಿಗೆ ಉಮಾಶ್ರೀ ʻಏಕನಟಿʼಯಾಗಿ, ಶರ್ಮಿಷ್ಠೆಯಾಗಿ ಮೈಸೂರಿನ ರಂಗಾಯಣದ ಭೂಮಿಗೀತ ರಂಗವೇದಿಕೆಯಲ್ಲಿ ಬರುವ ಶನಿವಾರ ಮತ್ತು ಭಾನುವಾರ ಕಾಣಿಸಿಕೊಳ್ಳಲಿದ್ದಾರೆ. ಇದು ರಂಗಸಂಪದ ಬೆಂಗಳೂರು ಮತ್ತು ರಂಗಾಯಣ ಮೈಸೂರಿನ ಕೊಡುಗೆ. ಸದ್ಯಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು ಹಾಗೂ ಸುದೇಶ್‌ ಮಹಾನ್‌ ಅವರ ರೇಖಾ ಚಿತ್ರಗಳನ್ನು ಗಮನಿಸಿದರೆ, ಪ್ರೇಕ್ಷಕರಿಗೆ ಹೊಸತನದ ರಂಗಪ್ರಯೋಗವೊಂದು ದಕ್ಕಲಿರುವುದು ಖಚಿತವಾಗುತ್ತದೆ.

ಎಂಭತ್ತರ ದಶಕದ ಆರಂಭದಲ್ಲಿ ಸಿಜಿಕೆ ರಂಗಸಂಪದಕ್ಕಾಗಿ ನಿರ್ದೇಶಿಸಿದ ʻಒಡಲಾಳʼದ ಸಾಕವ್ವನ ಪಾತ್ರದಲ್ಲಿ ಕಂಡು, ಆ ಪ್ರಯೋಗದ ಒಂದು ತಲೆಮಾರಿನ ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿದ ಅಸಾಧಾರಣ ಪ್ರತಿಭೆ ಉಮಾಶ್ರೀ. ʻಒಡಲಾಳʼದ ಕಥಾನಾಯಕಿಯಾಗಿ ಅಭಿನಯಿಸಿ, ಸಮಕಾಲೀನ ರಂಗಭೂಮಿಯ ದಂತಕಥೆಯಾಗಿ ಬ...