ಭಾರತ, ಏಪ್ರಿಲ್ 21 -- ಪೋಪ್‌ ಫ್ರಾನ್ಸಿಸ್ ಯಾರು?: ಗಂಭೀರ ಉಸಿರಾಟದ ಸಮಸ್ಯೆ ಎದುರಿಸಿದ ಪೋಪ್ ಫ್ರಾನ್ಸಿಸ್ ಅವರು ಇಂದು (ಏಪ್ರಿಲ್ 21) ಬೆಳಿಗ್ಗೆ ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು. ರೋಮ್‌ನ ಬಿಷಪ್‌ ಪೋಪ್ ಫ್ರಾನ್ಸಿಸ್ ಅವರು ಮೊದಲ ಲ್ಯಾಟಿನ್ ಅಮೆರಿಕನ್ ಧರ್ಮಗುರು ಎಂಬ ಕೀರ್ತಿಗೂ ಭಾಜನರಾಗಿದ್ದರು. ಅವರು ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಈಸ್ಟರ್ ಆಚರಣೆಗಳಲ್ಲಿ ಪೂರ್ತಿಯಾಗಿ ಭಾಗವಹಿಸುವುದು ಸಾಧ್ಯವಾಗಿರಲಿಲ್ಲ. ಆದಾಗ್ಯೂ, ಭಾನುವಾರ ಅವರು ಈಸ್ಟರ್ ಶುಭ ಹಾರೈಸಲು ಬೆಸಿಲಿಕಾದ ಬಾಲ್ಕನಿಗೆ ಬಂದು ಹ್ಯಾಪಿ ಈಸ್ಟರ್ ಎಂದು ಮೆಲುದನಿಯಲ್ಲಿ ಶುಭ ಹಾರೈಸಿದ್ದರು. ಅವರ ಲಿಖಿತ ಭಾಷಣವನ್ನು ಅವರ ಸಹೋದ್ಯೋಗಿ ಕಾರ್ಡಿನಲ್ ಕೆವಿನ್ ಫ್ಯಾರೆಲ್ ಓದಿ ಹೇಳಿದ್ದರು.

ಅರ್ಜೆಂಟೀನಾದ ಬ್ಯೂನೆಸ್ ಏರಿಸ್‌ನಲ್ಲಿ 1936ರ ಡಿಸೆಂಬರ್ 17ರಂದು ಮರಿಯೋ ಜೋಸ್ ಬೆರ್ಗೋಗ್ಲಿಯೋ ಮತ್ತು ರೆಜಿನಾ ಮರಿಯಾ ಸಿವೋರಿ ದಂಪತಿಯ ಐದು ಮಕ್ಕಳ ಪೈಕಿ ಹಿರಿಯವನಾಗಿ ಜನಿಸಿದರು. ತಂದೆ ಮರಿಯೋ ಜೋಸೆಫ್‌ ಇಟೆಲಿಯಿಂದ ವಲಸೆ ಬಂದ ಲೆಕ್ಕಿಗರಾಗಿದ್ದರು. ...