ಭಾರತ, ಮಾರ್ಚ್ 22 -- ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಗಿದ್ದ ಬಿಸಿಲ ಬೇಗೆಗೆ ಬೆಂದುಹೋಗಿದ್ದ ಬೆಂದಕಾಳೂರಿಗೆ ಮಳೆಯ ಸಿಂಚನವಾಗಿದೆ. ಕಳೆದೊಂದು ತಿಂಗಳಿಂದ ಕಾದು ಕೆಂಡವಾಗಿದ್ದ ಬೆಂಗಳೂರು ಬಿಸಿಲನೆಲಕ್ಕೆ ಭಾರಿ ಮಳೆಯಾಗುವ ಮೂಲಕ ತಂಪೆರೆಯಿತು. ಮಧ್ಯಾಹ್ನದ ವೇಳೆ ಮನೆಯಿಂದ ಹೊರಗೆ ಕಾಲಿಡಲೂ ಹಿಂಜರಿಯುತ್ತಿದ್ದ ಜನರಿಗೆ ವರುಣನ ಆಗಮನ ಮುದ ನೀಡಿದೆ. ಹವಾಮಾನ ಇಲಾಖೆ ನೀಡಿದ್ದ ಮುನ್ಸೂಚನೆಯಂತೆ ಗುಡುಗು-ಮಿಂಚು, ಜೋರು ಗಾಳಿ ಸಹಿತ ಭಾರಿ ಮಳೆಯಾಗಿದೆ. ಆಲಿಕಲ್ಲು ಗಾತ್ರದ ಮಳೆಯ ಹನಿಗಳು ನೆಲಕ್ಕೆ ಅಪ್ಪಳಿಸಿದ್ದು ವಿಶೇಷ.

ಬೆಂಗಳೂರಿನ ಯಲಹಂಕ, ಕೊಡಿಗೆ ಹಳ್ಳಿ, ಭದ್ರಪ್ಪಾ ಲೇಔಟ್, ಬಿಇಎಲ್ ಸೇರಿದಂತೆ ನಗರದ ಹಲವೆಡೆ ಬೇಸಿಗೆಯಲ್ಲಿ ಬಿರುಸಿನ ಮಳೆಯಾಗಿದೆ. ಬೆಳಿಗ್ಗೆ 10 ಗಂಟೆಯ ಮೇಲೆ ಎಂದಿನಂತೆ ನೆತ್ತಿ ಸುಡುವ ಬಿಸಿಲು ಇತ್ತು. ಗಂಟೆಗಳು ಕಳೆದಂತೆ ಮೋಡ ಕವಿದ ವಾತಾವರಣ ಉಂಟಾಯಿತು. ಇದರ ನಡುವೆ ಸೂರ್ಯನು ಆಗಾಗ್ಗೆ ದರ್ಶನ ಕೊಟ್ಟು ಹೋಗುತ್ತಿದ್ದ. ಮಧ್ಯಾಹ್ನ ದಾಟಿದರೂ ಮಳೆ ಬಾರದ ಕಾರಣ ಜನರು ಮೋಡ ಕವಿದ ವಾತಾವರಣವಷ್ಟೇ ಎಂದು ತಿಳಿದ...