ಭಾರತ, ಮಾರ್ಚ್ 8 -- ಲೋಕವನ್ನು ಆಳುತ್ತಿರುವುದು ಪಿತೃಪ್ರಧಾನತೆಯ ಗಂಡಾಳ್ವಿಕೆ. ಹಾಗಾಗಿ ಇದು ಸಮಾಜದ ಎಲ್ಲಾ ವಲಯಗಳಲ್ಲಿ ಆಳದಲ್ಲಿ ಬೇರೂರಿರುವ ಒಂದು ರೋಗ. ಈ ರೋಗವು ಗಂಡು ಹೆಣ್ಣನ್ನು ಕೂಡಿಯೇ ಬಲಿ ಪಡೆಯುತ್ತಿದೆ. ಪಿತೃಪ್ರಧಾನತೆಯು ಬೇಟೆಗಾರನ ಸ್ಥಾನದಲ್ಲಿದ್ದರೆ, ಗಂಡು ಹೆಣ್ಣುಗಳಿಬ್ಬರೂ ಬಲಿಪಶುವಿನ ಸ್ಥಾನದಲ್ಲಿದ್ದಾರೆ. ಆದರೆ ಗಂಡು ತನ್ನನ್ನೂ ಬಲಿ ಪಡೆಯುತ್ತಿರುವ 'ಪಿತೃಪ್ರಧಾನತೆಯ' ಒಳಗೇ ಸೇರಿಕೊಂಡು ತನ್ನನ್ನು ಬೇಟೆಗಾರನ ಅಂದರೆ ಆಳುವ 'ಯಜಮಾನ'ನ ಸ್ಥಾನದಲ್ಲಿಯೂ, ಮಹಿಳೆಯನ್ನು ಬಲಿಪಶುವಿನ ಅಂದರೆ 'ಗುಲಾಮಳ' ಸ್ಥಾನದಲ್ಲಿಯೂ ನೋಡುತ್ತಿದ್ದಾನೆ. ಸ್ತ್ರೀವಾದದ ತೊಡಕೆಂದರೆ ಈ ಎದುರಾಳಿತನವನ್ನೆ ತನ್ನ ಅಸ್ತ್ರವನ್ನಾಗಿಸಿಕೊಂಡಿರುವುದು. ಇದನ್ನು ಕಂಡುಕೊಳ್ಳುವ ಮೊದಲ ಹಂತದಲ್ಲಿ ಬೆಲ್‌ಹುಕ್ಸ್ ಈ ತನಕ ಚಾಲ್ತಿಯಲ್ಲಿದ್ದ ಸ್ತ್ರೀವಾದಿ ಸಿದ್ಧಾಂತಗಳನ್ನು ಶಸ್ತ್ರಚಿಕಿತ್ಸೆಗೆ ಒಳಗುಮಾಡುತ್ತಾಳೆ. ಅದರಲ್ಲೂ ಮುಖ್ಯವಾಗಿ ಬಿಳಿ ಮಹಿಳೆಯರು ಕಟ್ಟಿದ ಸ್ತ್ರೀವಾದಿ ದೃಷ್ಟಿಕೋನದಲ್ಲಿದ್ದ ಪುರುಷ-ಮಹಿಳೆಯ ಎದುರಾಳಿತನದ ವ್ಯಾಖ್ಯಾನಗಳನ...