ಭಾರತ, ಏಪ್ರಿಲ್ 23 -- ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಮಂಗಳವಾರ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಯು ಭಾರತಕ್ಕೆ ಭಾರತವೇ ದಂಗುಬಡಿಯುವಂತೆ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಘಟನೆ ನಡೆದ ಕೂಡಲೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದಾರೆ. ಇನ್ನೊಂದೆಡೆ, ಪ್ರಧಾನಿ ನರೇಂದ್ರ ಮೋದಿ ತಮ್ಮ ಸೌದಿ ಅರೇಬಿಯಾದ ಅಧಿಕೃತ ಪ್ರವಾಸ ಅರ್ಧಕ್ಕೇ ಮೊಟಕುಗೊಳಿಸಿ ಭಾರತಕ್ಕೆ ಆಗಮಿಸಿದ್ದು, ತುರ್ತು ಸಭೆಗಳನ್ನು ಮಾಡಿದ್ದಾರೆ. ಇದೇ ವೇಳೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ದೂರವಾಣಿ ಕರೆ ಮಾಡಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.

ಪಹಲ್‌ಗಾಮ್‌ನ ಬೈಸರಾನ್‌ ಹುಲ್ಲುಗಾವಲು ಪ್ರದೇಶ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದ್ದು, ಮಂಗಳವಾರ ಅಪರಾಹ್ನ ಉಗ್ರರು ಇಲ್ಲಿಗೆ ಆಗಮಿಸಿ ದಿಢೀರ್ ದಾಳಿ ನಡೆಸಿದ್ದರು. ಪ್ರತಿಯೊಬ್ಬರ ಐಡಿ ಕಾರ್ಡ್‌ ನೋಡಿ, ಬಟ್ಟೆ ಬಿಚ್ಚಿಸಿ ಗುಂಡು ಹೊಡೆದು ಹತ್ಯೆ ಮಾಡಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ...