ಭಾರತ, ಫೆಬ್ರವರಿ 28 -- ಜೆಸ್ ಜೊನಾಸೆನ್ (25ಕ್ಕೆ 3), ಮಿನ್ನು ಮಣಿ (17ಕ್ಕೆ 3) ಅವರ ಬೌಲಿಂಗ್ ಬಲ ಮತ್ತು ನಾಯಕಿ ಮೆಗ್​ ಲ್ಯಾನಿಂಗ್ ಅವರ ಅಜೇಯ ಅರ್ಧಶತಕದ (60*) ಸಹಾಯದಿಂದ ಹ್ಯಾಟ್ರಿಕ್​ ಗೆಲುವು ಸಾಧಿಸಿ ಬೀಗುತ್ತಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಮರಳಿದ್ದು, ಪ್ಲೇಆಫ್ ಹಾದಿಯನ್ನು ಸುಗಮಗೊಳಿಸಿದೆ. ಹರ್ಮನ್ ಪಡೆಯ ಅಸಂಘಟಿತ ಹೋರಾಟಕ್ಕೆ ಸೋಲಿನ ಬೆಲೆ ತೆರುವಂತಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಲಿಲ್ಲ. ಘಟಾನುಘಟಿ ಬ್ಯಾಟರ್​ಗಳೇ ಡೆಲ್ಲಿ ಬೌಲರ್​ಗಳ ಎದುರು ಮಂಡಿಯೂರಿದರು. ಪರಿಣಾಮ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್​ಗಳ ಸಾಧಾರಣ ಗುರಿ ನೀಡಿತು. ಹೀಲಿ ಮ್ಯಾಥ್ಯೂಸ್ ಮತ್ತು ಹರ್ಮನ್​ಪ್ರೀತ್ ಕೌರ್​ ತಲಾ 22 ರನ್ ಗಳಿಸಿದ್ದೇ ತಂಡದ ಪರ ಗರಿಷ್ಠ ಸ್ಕೋರ್. ಈ ಗುರಿ ಬೆನ್ನಟ್ಟಿದ ಡೆಲ್ಲಿ 1...